ಜೈವಿಕ ಔಷಧಗಳು -
ರೋಗಗಳ ಚಿಕಿತ್ಸೆ ನಿರೋಧಕಗಳಿಗಾಗಿ ಉಪಯೋಗಿಸುವ ವಿವಿಧ ವಿಷಪದಾರ್ಥಗಳು, ವಿಷಹಾರಿಗಳು, ದುರ್ಬಲೀಕೃತ ಅಥವಾ ನಿರ್ಜೀವ ವಿಷಾಣುಗಳನ್ನು ಒಳಗೊಂಡ ಲಸಿಕೆಗಳು ಚಿಕಿತ್ಸೆಗಾಗಿ ಉಪಯೋಗಿಸುವ ರಕ್ತದ್ರವ ಇತ್ಯಾದಿಗಳು (ಬಯೊಲಾಜಿಕಲ್ ಪ್ರಾಡಕ್ಟ್ಸ). ಇವೆಲ್ಲವನ್ನೂ ಸಾಮಾನ್ಯವಾಗಿ ಉಪಯೋಗಿಸಲಾಗುವುದು. ಆಗ ಇವು ವ್ಯಕ್ತಿಯಲ್ಲಿ ಆತ ಸಹಜ ರೋಗದಿಂದ ವಿಮುಕ್ತವಾದಾಗ ಪಡೆಯುವ ನೈಸರ್ಗಿಕ ರಕ್ಷೆಯನ್ನೇ ಉಂಟುಮಾಡುತ್ತವೆ. ಪೋಲಿಯೋ ವಿರುದ್ದ ಉಪಯೋಗಿಸುವ ಜೈವಿಕ ಔಷಧ ಮಾತ್ರ ಬಾಯಲ್ಲಿ ತೆಗೆದುಕೊಳ್ಳಬಹುದಾದಂಥದ್ದು. ಇದನ್ನು ಹೀಗೆ ಸೇವಿಸಿದಾಗ ವ್ಯಕ್ತಿಯಲ್ಲಿ ಇದು ಅತ್ಯಲ್ಪ ತೀವ್ರತೆಯ ಕರುಳಿನ ಪೋಲಿಯೋವನ್ನು ಉಂಟುಮಾಡಿದರೂ ಎಲ್ಲ ರೀತಿಯ ಪೋಲಿಯೊ ವಿರುದ್ದ ನಿರೋಧಕವಸ್ತುಗಳು ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾಗುವಂತೆ ಮಾಡುತ್ತದೆ. ಅದೇ ರೀತಿ ಪ್ರತಿರೋಧಶಕ್ತಿಯನ್ನು ಟೈಫಾಯಿಡ್ ವಿರುದ್ಧ ಬಳಸುವ ಬಾಯಿ ಲಸಿಕೆಗಳೂ ಬಂದಿವೆ. ರೋಗನಿರೋಧಕ ಚಿಕಿತ್ಸೆಗಳಿಗೆ ಉಪಯೋಗಿಸಲಾಗುವ ರಕ್ತ ಮತ್ತು ರಕ್ತರಸವನ್ನು (ಸೀರಮ್) ಕೂಡ ಜೈವಿಕ ಔಷಧಗಳೆಂದೇ ಪರಿಗಣಿಸಲಾಗಿದೆ. ಚಿಕಿತ್ಸೆಗೆ ಉಪಯೋಗಿಸುವ ರಕ್ತರಸವನ್ನು ನಿರ್ದಿಷ್ಟ ಪ್ರಾಯೋಗಿಕ ಸನ್ನಿವೇಶಗಳಲ್ಲಿ ಪ್ರಾಯೋಗಿಕ ಪ್ರಾಣಿಗಳ ರಕ್ತವನ್ನು ಶೇಖರಿಸಿ ಗರಣೆಕಟ್ಟಿಸಿ ಗರಣೆಯಿಂದ ಸರಿಸಲಾಗುತ್ತದೆ. ಈ ಮೂಲಕ ರಕ್ತವು ಕಣಗಳನ್ನು ಕಳೆದುಕೊಳ್ಳುವುದೇ ಅಲ್ಲದೆ ರಕ್ತದ್ರವ (ಪ್ಲಾಸ್ಮ) ಗರಣೆಕಟ್ಟುವುದೂ ತಪ್ಪುತ್ತದೆ. ಇಂಥ ರಕ್ತರಸಗಳನ್ನು ಚುಚ್ಚುಮದ್ದಿನ ಮೂಲಕ ದೇಹದೊಳಗೆ ಹೊಗಿಸಲಾಗುತ್ತದೆ. ಮಾನವರು ಇಲ್ಲವೆ ಪ್ರಾಣಿಗಳು ಯಾವುದೇ ಸೋಂಕಿನ ರೋಗದಿಂದ ವಿಮುಕ್ತರಾದ ಬಳಿಕ ಸಾಮಾನ್ಯವಾಗಿ ಅವರ ದೇಹದಲ್ಲಿ ಆ ಸೋಂಕಿನ ವಿರುದ್ಧ ವಸ್ತು ಇರುತ್ತದೆ. ಅಂಥವರ ರಕ್ತವನ್ನೊ ರಕ್ತದ್ರವವನ್ನೊ ರಕ್ತರಸವನ್ನೊ ಕೂರಾದರೋಗ (ಅಕ್ಯೂಟ್ ಇಲ್ನೆಸ್) ಚಿಕಿತ್ಸೆಗಾಗಿ ಇಲ್ಲವೆ ತಾತ್ಕಾಲಿಕ ರೋಗನಿರೋಧಕವಾಗಿ ಬಳಸಬಹುದು. ಇವು ವಿಷಾಣುಗಳಿಗೆ ಮಾರಕವಾಗಿ ವ್ಯಕ್ತಿಯನ್ನು ಸೋಂಕಿನಿಂದ ರಕ್ಷಿಸುತ್ತವೆ. ವಿಷವಸ್ತುಗಳನ್ನು ಮಾನವರಿಗೂ ಪ್ರಾಣಿಗಳಿಗೂ ಚುಚ್ಚುಮದ್ದಿನ ಮೂಲಕ ಒಂದು ವಿಲ್‍ನಷ್ಟು ಕೊಟ್ಟರೆ ಮಾರಕಗಳು. ಆದರೆ ಸೂಕ್ತವಾಗಿ ಕಡಿಮೆ ಪ್ರಮಾಣದಲ್ಲಿ ಕೊಟ್ಟರೆ ಇವು ಸ್ವೀಕೃತ ದೇಹದಲ್ಲಿ ತಮಗೇ ವಿರುದ್ಧವಾದ ವಸ್ತುಗಳನ್ನು ಉತ್ಪಾದಿಸಿ ವ್ಯಕ್ತಿ ಅದೇ ವಿಷವಸ್ತುವಿನ ವಿರುದ್ಧ ರಕ್ಷಣೆಪಡೆವ ಸ್ಥಿತಿಯನ್ನು ಸೃಜಿಸುತ್ತವೆ. ಈ ವಿಷವಸ್ತುಗಳು ಹಾವಿನ ಅಥವಾ ಜೇಡರ ಹುಳುವಿನ ವಿಷವಸ್ತು ಇಲ್ಲವೆ ಸೋಂಕುರೋಗಗಳ ವಿಷಾಣುಗಳ ವಿಷವಸ್ತುವಾಗಿರಬಹುದು. ಸೋಂಕು ರೋಗಗಳ ವಿಷವಸ್ತುಗಳನ್ನು ಒಂದೊಂದೇ ಆಗಿ ಉಪಯೋಗಿಸುವುದಕ್ಕಿಂತ ಅನೇಕ ವಿಷಾಣುಗಳ ವಿಷಗಳ ಮಿಶ್ರಣವನ್ನು ಉಪಯೋಗಿಸುವುದೂ ರೂಢಿಯಲ್ಲಿ ಉಂಟು. ಇಂಥ ವಿಷಮಿಶ್ರಣವನ್ನು ತಯಾರಿಸಬೇಕಾದರೆ ಮೊದಲು ಸೂಕ್ತರೀತಿಯ ವಿಷಾಣುಗಳನ್ನು ಕೃತಕ ಮಾಧ್ಯಮದಲ್ಲಿ ಕೃಷಿಮಾಡಿ ಶೇಖರಿಸಿ ಬಳಿಕ ಅವನ್ನು ಚೆನ್ನಾಗಿ ತೊಳೆಯಲಾಗುತ್ತದೆ. ಅನಂತರ ಅವನ್ನು ಬೇರ್ಪಡಿಸಿ ಅವಕ್ಕೆಂದೇ ತಯಾರಾದ ವಿಶಿಷ್ಟವಾದ ರುಬ್ಬುವಯಂತ್ರದಲ್ಲಿ ಅರೆದು ಪುನಃ ಅಪಕೇಂದ್ರೀಕರಿಸಿ ನೀರಿನಂತೆ ಸ್ವಚ್ಛವಾದ ವಿಷದ್ರಾವಣವನ್ನು ಬೇರ್ಪಡಿಸಲಾಗುವುದು. ಅಲ್ಪ ಪ್ರಮಾಣದಿಂದ ಪ್ರಾರಂಭಿಸಿ ಸ್ವಲ್ಪಸ್ವಲ್ಪವಾಗಿ ಹೆಚ್ಚಿಸುತ್ತ ಪ್ರಯೋಗ ಪ್ರಾಣಿಗಳಿಗೆ ಇಂಥ ಯಾವುದೇ ವಿಷವಸ್ತುವನ್ನು ಕೊಟ್ಟರೆ ಅವುಗಳ ರಕ್ತದಲ್ಲಿ ವಿಶಿಷ್ಟ ಪ್ರತಿವಿಷವಸ್ತು ಅಧಿಕವಾಗಿ ಉತ್ಪನ್ನವಾಗುತ್ತದೆ. ಈ ವಸ್ತು ಇರುವ ರಕ್ತರಸವನ್ನು ಮಾನವರಲ್ಲಿ ರೋಗ ಚಿಕಿತ್ಸೆ ನಿರೋಧಕ್ಕಾಗಿ ಕೊಡಲಾಗುವುದು. ಇಂಥ ಜೈವಿಕ ಔಷಧಿಗಳಿಗೆಲ್ಲ ಅವುಗಳ ನಿರ್ದಿಷ್ಟ ಚಿಕಿತ್ಸಾಸಾಮಥ್ರ್ಯವಿರುವ ಕಾಲಾವಧಿಯನ್ನು ಸೂಚಿಸಿರುತ್ತದೆ. ಆ ಗಡು ಕಳೆದ ಬಳಿಕ ಸ್ವಲ್ಪ ಕಾಲ ಸಾಮಾನ್ಯವಾಗಿ ಇವನು ಉಪಯೋಗಿಸಬಹುದಾದರೂ ಅಂಥ ಉಪಯೋಗದಿಂದ ನಿರೀಕ್ಷಿತ ಗುಣ ದೊರೆಯುವುದು ಕಷ್ಟ. ಕೆಲವು ವೇಳೆ ಇಂಥ ಕಾಲಾವಧಿ ಮೀರಿದ ಜೈವಿಕ ಔಷಧಗಳಿಂದ ದೇಹಕ್ಕೆ ಘಾತವೇ ಆಗಬಹುದು. ಜೈವಿಕ ಔಷಧಗಳ ಗುಂಪಿಗೆ ಹಾವಿನ ವಿಷ, ಅಗ್ಲೂಟಿನಿನ್, ರಕ್ತರಸ, ಪ್ರತಿಜೈವಿಕಗಳು (ಆಂಟಿಬಯೋಟಿಕ್ಸ್), ರಕ್ತದ್ರವ, ಲಸಿಕೆಗಳು (ವಿಷಮಜ್ವರದ ವಿರುದ್ಧವಾದ ಟಿ.ಎ.ಬಿ., ನೆಗಡಿವಿರುದ್ಧ ಲಸಿಕೆ, ಪೋಲಿಯೋ ವಿರುದ್ಧ ಲಸಿಕೆ ಇತ್ಯಾದಿ), ನಿರೋಧಜನಕಗಳು (ಆಂಟಿಜೆನಗಳು), ನಿರ್ಬಲಗೊಳಿಸಿದ ವಿಶಿಷ್ಟ ಏಕಾಣು ಇಲ್ಲವೆ ಏಕಾಣುಗಳ ಮಿಶ್ರಣ, ಡಿಫ್ತೀರಿಯಾ, ನಾಯಿಕೆಮ್ಮು ಮತ್ತು ಧನುರ್ವಾಯುಗಳ ನಿವಾರಣೆಗಾಗಿ ಉಪಯೋಗಿಸುವ ದುರ್ಬಲಗೊಳಿಸಿದ ವಿಷವಸ್ತು ಇಲ್ಲವೆ ಪ್ರತಿವಿಷಗಳು ಇವೆಲ್ಲ ಸೇರಿವೆ.

	ಜೈವಿಕ ಔಷಧಗಳ ವರ್ಗೀಕರಣ : 1 ಕೂರಾದ ರೋಗಚಿಕಿತ್ಸೆಗೆ ಮತ್ತು ತಾತ್ಕಾಲಿಕ ರೋಗನಿವಾರಣೆಗೆ ಉಪಯೋಗಿಸತಕ್ಕವು. ಇವು ಕ್ರಿಯಾತ್ಮಕವಲ್ಲದ (ಪ್ಯಾಸಿವ್) ರೋಗನಿವಾರಣಸಾಮಥ್ರ್ಯವನ್ನು ನೀಡುತ್ತವೆ (ಚಿ) ಪ್ರತಿವಿಷಗಳು (ಹಾವು ಜೇಡರಹುಳುವಿನ ವಿಷದ ವಿರುದ್ಧ) (b) ವಿಶಿಷ್ಟವಾಗಿ ತಯಾರಿಸಿದ ರಕ್ತರಸ.

	ಕ್ರಿಯಾತ್ಮಕವಲ್ಲದ ರೋಗನಿವಾರಕಗಳ ಉಪಯೋಗದಿಂದ ವ್ಯಕ್ತಿಗೆ ಯಾವಾಗಲೂ ಅನುಕೂಲವಾಗುತ್ತದೆ ಎಂದು ಹೇಳುವಂತಿಲ್ಲ. ಕೆಲವು ವೇಳೆ ವ್ಯಕ್ತಿಯಲ್ಲಿ ಈ ನಿವಾರಕಗಳ ವಿರುದ್ಧವಾಗಿಯೇ ಪ್ರತಿವಸ್ತುಗಳು ಉತ್ಪನ್ನವಾಗಬಹುದು. ಮುಂದಿನ ಸಾರಿ ಈ ನಿವಾರಕವನ್ನು ಉಪಯೋಗಿಸಿದಾಗ ಅದು ರಕ್ಷಣೆಯನ್ನು ಒದಗಿಸುವ ಬದಲು ಅಲ್ಪವಾಗಿಯೋ ಅಗಾಧವಾಗಿಯೋ ದೈಹಿಕ ತೊಂದರೆಗಳನ್ನೇ ಉಂಟುಮಾಡುತ್ತದೆ. ಕೆಲವು ವೇಳೆ ಇದು ಮಾರಕವೇ ಆಗಬಹುದು. ಜೈವಿಕ ಔಷಧದಿಂದ ಉಂಟಾಗುವ ಅನಪೇಕ್ಷಣೀಯ ಪರಿಣಾಮಕ್ಕೆ ಅನಾಫೈಲಾಕ್ಸಿಸ್ ಎಂದು ಹೆಸರು. ಇಂಥ ದುಷ್ಪರಿಣಾಮ ಉಂಟಾಗುವ ಸಂಭವವಿರುವುದರಿಂದ ಈ ಜೈವಿಕ ಔಷಧಗಳನ್ನು ಉಪಯೋಗಿಸುವುದಕ್ಕೆ ಮೊದಲು ಅವು ವ್ಯಕ್ತಿಗೆ ಕ್ಷೇಮಕರವೇ ಅಲ್ಲವೇ ಎಂಬುದನ್ನು ಪೂರ್ವಭಾವಿಯಾಗಿ ಪರೀಕ್ಷಿಸಬೇಕಾಗುತ್ತದೆ. ಬಹು ಸ್ವಲ್ಪಪ್ರಮಾಣದಲ್ಲಿ ಇಂಥ ಜೈವಿಕ ಔಷಧವನ್ನು ಚರ್ಮದ ಒಳಹೋಗಿಸಲಾಗುತ್ತದೆ. ಕ್ಷೇಮಕರವಾಗಿದ್ದರೆ ಚುಚ್ಚಿದ ಸ್ಥಳದಲ್ಲಿ ಕಡಿತ ಉಂಟಾಗಿ ದದ್ದು ಏಳುತ್ತದೆ. ಪ್ರತಿಕ್ರಿಯೆ ತೀವ್ರವಾಗಿದ್ದರೆ ಹೊಪ್ಪಳೆಯುಂಟಾಗಬಹುದು. ಜೈವಿಕ ಔಷಧವನ್ನು ಪ್ರಯೋಗಿಸುವಾಗ ಅದರೊಡನೆ ಸ್ವಲ್ಪ ಅಡ್ರೀನಲಿನ್ನನ್ನು ಸೇರಿಸಿಕೊಟ್ಟರೆ ಸಂಭವಿಸಬಹುದಾದ ಅಹಿತಕರ ಪರಿಣಾಮಗಳು ಉಂಟಾಗುವುದಿಲ್ಲವಾದರೂ ಅಲ್ಪವಾಗಿರುತ್ತವೆ. ಅನಪೇಕ್ಷಣೀಯ ಪರಿಣಾಮಗಳು ಉಂಟಾದರೆ ಹಿಸ್ಟಮಿನ್ ಪ್ರತಿವಸ್ತುಗಳು, ಕ್ಯಾಲ್ಸಿಯಮ್ ಗ್ಲೂಕೋನೆಟ್ ಇತ್ಯಾದಿಗಳನ್ನು ಕೊಡಬೇಕಾಗುತ್ತದೆ. ಬೇಡದ ಪರಿಣಾಮ ತತ್‍ಕ್ಷಣವೇ ಕಾಣಿಸಿಕೊಳ್ಳದೆ ನಾಲ್ಕಾರು ದಿವಸಗಳಾದ ಬಳಿಕ ಕಾಣಿಸಿಕೊಳ್ಳಬಹುದು. ಇದಕ್ಕೆ ಸೀರಮ್ ಸಿಕ್‍ನೆಸ್ ಎಂದು ಹೆಸರು. ಜ್ವರ, ಮೈಮೇಲೆಲ್ಲ ಗಂದೆಗಳು. ಕೀಲುನೋವು ಇತ್ಯಾದಿ ಬಾಧೆಗಳು ಈ ಸ್ಥಿತಿಯಲ್ಲಿ ಕಂಡುಬರುತ್ತವೆ. ಆದರೂ ಈ ಸ್ಥಿತಿ ಅನಾಫೈಲಾಕ್ಸಿಸ್‍ನಷ್ಟು ತೀವ್ರವಾಗಿರುವುದಿಲ್ಲ.

	ಬಾಲ್ಯದಲ್ಲಿ ಇಲ್ಲವೆ ಅನಂತರ ಬಂದ ದಡಾರ, ಪೋಲಿಯೋ, ಇತ್ಯಾದಿ ರೋಗಗಳಿಂದ ಗುಣಹೊಂದಿದ ರೋಗಿಗಳ ರಕ್ತದಲ್ಲಿ ಈ ರೋಗಗಳ ಪ್ರತಿರೋಧ ವಸ್ತುಗಳು ಜೀವಮಾನಪರ್ಯಂತ ಇರುತ್ತವೆಂದು ನಂಬಲಾಗಿದೆ. ಸಮಾಜದಲ್ಲಿ ಅನೇಕರು ಕಂಡಹಾಗೆಯೇ, ಕೆಲವರು ಅವ್ಯಕ್ತವಾಗಿ ಇಂಥ ಕಾಯಿಲೆಗಳಿಂದ ನರಳಿರುವುದರಿಂದಲೂ ಮಿಕ್ಕವರು ಇಂಥ ರೋಗಿಗಳೊಡನೆ ಬಹುಕಾಲಿಕ ನಿಕಟ ಸಂಪರ್ಕ ಉಳ್ಳವರಾಗಿರುವ ಕಾರಣದಿಂದಲೂ ಸಾಮಾನ್ಯವಾಗಿ ಎಲ್ಲ ವಯಸ್ಕರಲ್ಲೂ ಇಂಥ ಪ್ರತಿರೋಧವಸ್ತುಗಳು ಇದ್ದೇ ಇರುತ್ತವೆ ಎಂಬ ಭಾವನೆಯಿಂದ ಕ್ರಿಯಾತ್ಮಕವಲ್ಲದೆ ರೋಗಚಿಕಿತ್ಸೆ ನಿವಾರಣೆಗಳಿಗೆ ವಯಸ್ಕರ ರಕ್ತದ್ರವವನ್ನು ಉಪಯೋಗಿಸಿದಾಗ ಉಂಟಾಗುವ ಅನಪೇಕ್ಷಣೀಯ ಪರಿಣಾಮಗಳು ಉಂಟಾಗುವುದಿಲ್ಲ.

	ನಿರ್ದಿಷ್ಟ ರಕ್ತರಸದ ತಯಾರಿ : ಇದಕ್ಕೆ ಕುದುರೆ, ದನ, ಮೇಕೆ, ಮೊಲ ಮುಂತಾದ ವಸ್ತುಗಳನ್ನು ಉಪಯೋಗಿಸಲಾಗುತ್ತದೆ. ಸೂಕ್ಷ್ಮಾಣು, ಏಕಾಣು, ವಿಷಾಣುಗಳ ವಿಷ, ಹಾವು ಜೇಡ ಇವುಗಳ ವಿಷ ಮುಂತಾದ ಯಾವುದಾದರೂ ಪ್ರತಿರೋಧಜನಕವನ್ನು ಅಲ್ಪಪ್ರಮಾಣದಲ್ಲಿ ಅವಶ್ಯಕವಾಗಿದ್ದರೆ ನಿರ್ಬಲಗೊಳಿಸಿ ಈ ಪ್ರಾಣಿಗಳಿಗೆ ಚುಚ್ಚುಮದ್ದಾಗಿ ಕೊಡಲಾಗುತ್ತದೆ. ಕೆಲವು ತಿಂಗಳುಗಳ ಪರ್ಯಂತ ಇಂಥ ಪ್ರತಿರೋಧಜನಕದ ಪ್ರಮಾಣವನ್ನು ಕ್ರಮೇಣ ಹೆಚ್ಚಿಸಲಾಗುತ್ತದೆ. ಈ ಅವಧಿಯಲ್ಲಿ ಪ್ರಾಯೋಗಿಕ ಪ್ರಾಣಿಯಲ್ಲಿ ಅನುರೂಪವಾದ ಪ್ರತಿರೋಧವಸ್ತು ಉತ್ಪಾದನೆಯಾಗಿ ಗಣನೀಯ ಪ್ರಮಾಣದಲ್ಲಿ ಅದರ ರಕ್ತದಲ್ಲಿರುತ್ತದೆ. ಪ್ರಾಯೋಗಿಕ ಪ್ರಾಣಿಗೆ ಮಾರಕ ಪ್ರಮಾಣಕ್ಕಿಂತ 5-10 ಪಟ್ಟು ಅಥವಾ ಇನ್ನೂ ಹೆಚ್ಚು ವಿಷವಸ್ತುವನ್ನು ಕೊಟ್ಟರೂ ಅದು ಕ್ಷೇಮವಾಗಿಯೇ ಇರುವಂಥ ಸ್ಥಿತಿ ಏರ್ಪಟ್ಟಿರುತ್ತದೆ. ಇಂಥ ಪ್ರಾಣಿಯ ರಕ್ತವನ್ನು ಶೇಖರಿಸಿ ಅದನ್ನು ಗರಣೀಕರಿಸಿ ಅದರಿಂದ ರಕ್ತರಸವನ್ನು ಬೇರ್ಪಡಿಸಲಾಗುತ್ತದೆ. ರಕ್ತರಸದ ಗ್ಯಾಮಾಗ್ಲಾಬ್ಯುಲಿನ್ ಎಂಬ ಪ್ರೋಟೀನ್ ಅಂಶವನ್ನೇ ಬೇರ್ಪಡಿಸಬಹುದು. ಇಂಥ ಗ್ಯಾಮಾಗ್ಲಾಬ್ಯುಲಿನ್ ಆಂಶದಲ್ಲಿ ಪ್ರತಿರೋಧವಸ್ತು ಇರುವುದರಿಂದ ಇದು ಅತಿ ಪ್ರಬಲವಸುವಾಗಿರುವುದು. ಇದನ್ನು ಅಲ್ಪಪ್ರಮಾಣದಲ್ಲಿ ಉಪಯೋಗಿಸಬಹುದು. ಇಂಥ ರಕ್ತರಸವನ್ನೋ ಗ್ಯಾಮಾಗ್ಲಾಬ್ಯುಲಿನ್ ದ್ರಾವಣವನ್ನೋ ಸೂಕ್ತವಾಗಿ ಕಾಯಿಸಿ ಸೋಸಿ ಅನ್ಯವಿಷಾಣು ವಿಷಪದಾರ್ಥಗಳಿಂದ ಮುಕ್ತಗೊಳಿಸಿ ಶುದ್ಧಿಮಾಡಿ, ಅದರ ಸಾಮಥ್ರ್ಯ ಕಡಿಮೆ ಆಗದಂತೆ ಬಹುಕಾಲ ರಕ್ಷಿಸುವ ಸೂಕ್ತ ರಕ್ಷಣಾವಸ್ತುವನ್ನು ಸೇರಿಸಿ, ಬೇಡದ ಪರಿಣಾಮಗಳ್ನು ಉಂಟುಮಾಡುವುದಿಲ್ಲವೆಂದು ಪ್ರಾಯೋಗಿಕವಾಗಿ ಪರೀಕ್ಷಿಸಿ ನಿರ್ಧರಿಸಿ ಗಾಜಿನ ಕೊಳವೆಗಳೊಳಗೆ ಹಾಕಿ ಮೊಹರು ಮಾಡಲಾಗುತ್ತದೆ. ಇವುಗಳ ಪ್ರಾಣಿಮೂಲ, ಸಾಮಥ್ರ್ಯ, ಕಾಲಾವಧಿಗಳನ್ನು ನಿರ್ದಿಷ್ಟವಾಗಿ ಸೂಚಿಸಿರುತ್ತದೆ.

	2 ಬಹುಕಾಲಿಕ ರೋಗಚಿಕಿತ್ಸೆಗೆ ಮತ್ತು ದೀರ್ಘಾವಧಿ ರೋಗನಿವಾರಣೆಗೆ ಉಪಯೋಗಿಸತಕ್ಕವು. ಇವು ದೇಹದಲ್ಲಿ ಕ್ರಿಯಾತ್ಮಕ ರೋಗನಿವಾರಣ ಸಾಮಥ್ರ್ಯವನ್ನು ಉಂಟುಮಾಡುತ್ತವೆ. ಇವನ್ನು ಮುಂದೆ ಬರೆದಿದೆ :
	ಚಿ) ಶಕ್ತಿಗುಂದಿಸಿದ ಇಲ್ಲವೆ ಜೀವವಿಲ್ಲದ ಏಕಾಣುಗಳನ್ನುಳ್ಳ ವಸ್ತುಗಳು
	b) ವಿಷವಸ್ತುಗಳು ಮತ್ತು ಶಕ್ತಿಗುಂದಿಸಿದ ವಿಷವಸ್ತುಗಳು
	ಛಿ) ವಿಷವಸ್ತು ಪ್ರತಿವಿಷಗಳ ಮಿಶ್ರಣ
	ಜ) ಟ್ಯುಬರ್ ಕ್ಯುಲಿನ್
	e) ಸೂಕ್ಷ್ಮಾಣುಗಳ ಲಸಿಕೆ

	ಕ್ರಿಯಾತ್ಮಕ ರೋಗನಿವಾರಣೆಗೆ (ಆ್ಯಕ್ಟಿವ್ ಇಮ್ಯೂನೈಸೇಷನ್) ಲಸಿಕೆಗಳು ವಿಷಾಣುಗಳ ವಿಷ (ಅವಶ್ಯಬಿದ್ದರೆ ದುರ್ಬಲಗೊಳಿಸಿದ್ದು). ದುರ್ಬಲಗೊಳಿಸಿದ ವಿಷಾಣುಗಳು ಇದನ್ನು ಪ್ರತಿರೋಧ ಜನಕಗಳಾಗಿ ಉಪಯೋಗಿಸಲಾಗುತ್ತದೆ. ದುರ್ಬಲಗೊಳಿಸಿ ತಯಾರಿಸಿದ ರೋಗಾಣುಗಳ ಹೆಸರಿನಿಂದಲೇ ಲಸಿಕೆಗಳನ್ನು ಕರೆಯಲಾಗುತ್ತದೆ-ಟೈಫಾಯಿಡ್ ವ್ಯಾಕ್ಸೀನ್, ಪೋಲಿಯೋ ವ್ಯಾಕ್ಸೀನ್, ಡಿಫ್ತೀರಿಯ ಟಾಕ್ಸಾಯ್ಡ್ ಇತ್ಯಾದಿಗಳು ಇಂಥ ಹೆಸರಿರುವ ಲಸಿಕೆಗಳು. ಈ ಲಸಿಕೆಗಳ ತಯಾರಿಕೆಗಾಗಿ ಪ್ರತಿರೋಧಕಗನ್ನು ದುರ್ಬಲಗೊಳಿಸುವುದು ಅತಿಯಾಗಿರಬಾರದು. ಹಾಗಾದರೆ ಇಂಥ ಜೈವಿಕ ಔಷಧವನ್ನು ಸ್ವೀಕರಿಸಿದ ವ್ಯಕ್ತಿಯಲ್ಲಿ ಪ್ರತಿರೋಧಕಗಳು ಉತ್ಪನ್ನವಾಗದೇ ಇರಬಹುದು. ಸಿಡುಬು, ಪೀತಜ್ವರ, ಕ್ಷಯ ಈ ರೋಗಗಳ ವಿಷಾಣುಗಳನ್ನು ದುರ್ಬಲೀಕರಿಸಿ ವ್ಯಕ್ತಿಯ ದೇಹದೊಳಕ್ಕೆ ಸೇರಿಸಿದರೂ ಅವು ಕೆಲಮಟ್ಟಿಗೆ ವೃದ್ಧಿಹೊಂದುತ್ತವೆ. ಆದರೆ ದೇಹವೆಲ್ಲ ವ್ಯಾಪಿಸದೆ ಸ್ಥಳೀಯವಾಗಿ ನೆಲೆಸಿ ಅಲ್ಪಕಾಲದ ಅಲ್ಪತೀಕ್ಷ್ಣತೆಯ ರೋಗವನ್ನು ಉಂಟುಮಾಡಿ ಮುಂದೆ ಪ್ರಾಪ್ತವಾಗಬಹುದಾದ ಪ್ರಬಲ ಸೋಂಕಿನ ವಿರುದ್ಧ ರಕ್ಷಣೆಯನ್ನು ಒದಗಿಸುತ್ತವೆ. ಟೈಫಾಯಿಡ್, ನಾಯಿಕೆಮ್ಮು, ಪೋಲಿಯೋ ವಿಷಾಣುಗಳನ್ನು ಪೂರ್ಣವಾಗಿ ಸಾಯಿಸಿ ಜೈವಿಕ ಔಷಧವನ್ನಾಗಿ ಉಪಯೋಗಿಸಲಾಗುತ್ತದೆ. ಡಿಫ್ತೀರಿಯ ಟೆಟನಸುಗಳ ವಿಷಾಣುವಿಷಗಳನ್ನು ಕಾವು ಮತ್ತು ರಾಸಾಯನಿಕ ಮಿಶ್ರಣದಿಂದ ದುರ್ಬಲೀಕರಿಸಲಾಗುತ್ತದೆ. ಏಕಾಣುಗಳ್ನು ದುರ್ಬಲೀಕರಿಸಲು ಅವನ್ನು ನಿರ್ದಿಷ್ಟ ಕೃತಕಮಾಧ್ಯಮದಲ್ಲಿ ಪದೇ ಪದೇ ಕೃಷಿ ಮಾಡಲಾಗುತ್ತದೆ. ಇಲ್ಲವೆ ವಿಶೇಷ ಪರಿಸ್ಥಿತಿಗಳಲ್ಲಿ ಕೃಷಿ ಮಾಡಲಾಗುತ್ತದೆ. ಸೂಕ್ಷ್ಮಾಣುಗಳ (ವೈರಸ್) ಕೃಷಿಗೆ ಜೀವಂತಮಾಧ್ಯಮ ಬೇಕಾಗಿರುವುದರಿಂದ ಇವನ್ನು ವೃದ್ಧಿಯಾಗುತ್ತಿರುವ ತತ್ತಿಯೊಳಗೊ ಅಂಗಾಂಶಗಳ ಕೃತಕ ಬೆಳೆವಣಿಗೆಯಲ್ಲೊ ನಾಟಿ ಹಾಕಲಾಗುತ್ತದೆ. ಪದೇ ಪದೇ ಹೀಗೆ ಮಾಡಿ ಅನೇಕ ಸಂತತಿಗಳಾದ ಬಳಿಕ ತತ್ತಿಯ ಸಾರ. ಅಂಗಾಂಶಗಳ ಸಾರದಲ್ಲಿ ದುರ್ಬಲಗೊಂಡ ಸೂಕ್ಷ್ಮಾಣು ಇರುತ್ತದೆ. ಇದನ್ನು ಜೈವಿಕ ಔಷಧವಾಗಿ ಉಪಯೋಗಿಸಬಹುದು. ವಿಷಾಣುವಿನ ವಿಷದ ಬದಲು ಅದಕ್ಕೆ ಸ್ಫಟಿಕವನ್ನೋ ಅಲ್ಯೂಮಿನಿಯಮ್ ಫಾಸ್ಪೇಟನ್ನೋ ಸೇರಿಸಿದಾಗ ವಿಷವಸ್ತು ಕಣಗಳಂತಾಗಿ ಮಾರ್ಪಟ್ಟು ಪ್ರಯೋಗಪಾತ್ರೆಯ ತಳದಲ್ಲಿ ಶೇಖರವಾಗುತ್ತದೆ. ಇದನ್ನು ಬೇರ್ಪಡಿಸಿ ಶುದ್ಧಿಮಾಡಿ ಕದಡನ್ನಾಗಿ ಮಾರ್ಪಡಿಸಿ ಜೈವಿಕ ಔಷಧಿಯಾಗಿ ಉಪಯೋಗಿಸಲಾಗುವುದು. ಇದು ಸಾಮಥ್ರ್ಯಗುಂದಿಸಿದ ವಿಷಾಣುವಿಷದ ಉಪಯೋಗಕ್ಕಿಂತ ಉತ್ತಮ. ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇಂಥ ಕದಡನ್ನು ಉಪಯೋಗಿಸಬಹುದು. ಪಟಿಕದಿಂದ ತಳ ಸೇರಿಸಿದ ಇಂಥ ವಿಷವಸ್ತುವನ್ನು ಒಂದೇ ವಿಷಾಣುವಿನ ವಿಷದಿಂದ ತಯಾರುಮಾಡುವ ಬದಲು ಮೂರು ನಾಲ್ಕು ವಿಷಾಣುಗಳ ವಿಷಮಿಶ್ರಣದಿಂದ ತಯಾರು ಮಾಡಲಾಗುತ್ತದೆ. ಇದನ್ನು ಕೊಡುವುದರಿಂದ ವ್ಯಕ್ತಿಗೆ ರೋಗನಿರೋಧಕ ಸಾಮಥ್ರ್ಯ ಒದಗಿಬರುವುದಕ್ಕೆ ಬೇಕಾದ ಕಾಲಾವಧಿಯಲ್ಲಿ ಅನೇಕ ತಿಂಗಳುಗಳು ಉಳಿತಾಯವಾಗುತ್ತದೆ. ಡಿಫ್ತೀರಿಯ, ಧನುರ್ವಾಯು, ನಾಯಿಕೆಮ್ಮು ಇವು ಮೂರು ರೋಗಾಣುಗಳ ವಿಷಗಳ ವಿಷಯದಲ್ಲಿ ಹೀಗೆ ಮಾಡುವುದು ವಾಡಿಕೆ. ಮೂರು ರೀತಿಯ ಪೋಲಿಯೋ ಸೂಕ್ಷ್ಮಾಣುಗಳ ಮಿಶ್ರಣವನ್ನು ಹೀಗೆ ತಯಾರುಮಾಡುವುದು ರೂಢಿಯಲ್ಲಿದೆ. ಇದೇ ರೀತಿ ವಿಷಮಜ್ವರ ಮತ್ತು ಧನುರ್ವಾಯುವಿನ ವಿಷಾಣುಗಳ ವಿಷಮಿಶ್ರಣವನ್ನೂ ತಯಾರಿಸಿದೆ. ಆದರೆ ಬೇಕಾಬಿಟ್ಟಿಯಾಗಿ ವಿವಿಧ ವಿಷಾಣುಗಳ ವಿಷಮಿಶ್ರಣವನ್ನು ತಯಾರಿಸುವ ಕೇಂದ್ರದಲ್ಲೆ ಸೂಕ್ತವಾಗಿ ಮಾಡಲಾಗುವುದೇ ಹೊರತು ಚುಚ್ಚುಮದ್ದು ಚುಚ್ಚುವ ಕ್ಷಣದಲ್ಲಿ ಬೆರೆಸುವುದಿಲ್ಲ.

	3 ಚಿಕಿತ್ಸೆ ನಿವಾರಣೆಗಾಗಿ ದೇಹದಲ್ಲಿ ಸ್ವಾಭಾವಿಕವಾಗಿ ಇದರ ಪ್ರೋಟೀನಿನ ಬಳಕೆ. ಇದು ನಿರ್ದಿಷ್ಟ ಅಥವಾ ಅನಿರ್ದಿಷ್ಟ ಉದ್ದೇಶಗಳಿಗಾಗಿ ಬಳಸಬಹುದಾಗಿರುವ ಮಾರ್ಗ. ತಕ್ಕ ಪ್ರೋಟೀನುಗಳನ್ನೋ ವಸ್ತುಗಳ ಸಾರವನ್ನೋ ಅಲೆರ್ಜೆನ್ನುಗಳನ್ನೋ ಇಂಥ ಚಿಕಿತ್ಸೆಗೆ ಉಪಯೋಗಿಸಲಾಗುತ್ತದೆ.

	4 ರೋಗ ತನಿಖೆಯ ಕ್ರಮದಲ್ಲಿ ಉಪಯೋಗಿಸುವಂಥವು: ಮೇಲಿನ ಗುಂಪುಗಳಲ್ಲಿರುವ ಅನೇಕ ವಸ್ತುಗಳ ಪ್ರೋಟೀನುಗಳು, ವಿಷವಸ್ತುಗಳು, ಟ್ಯುಬರ್ ಕ್ಯುಲಿನ್ ಇತ್ಯಾದಿ.

	5 ನೈಸರ್ಗಿಕ ಏಕಾಣುನಿರೋಧಕ ಸೂಕ್ಷ್ಮಾಣುಗಳು : ಬ್ಯಾಕ್ಟಿರಿಯೋ ಫೇಜುಗಳು.

	6 ಇತರ ಜೈವಿಕ ಔಷಧಗಳು : ರಕ್ತದ್ರವ, ರಕ್ತದ್ರವದಲ್ಲಿರುವ ಅಲ್‍ಬ್ಯುಮಿನ್ ಎಂಬ ಪ್ರೋಟೀನು, ಕುಸುಮರೋಗ (ಹಿಮೋಫೀಲಿಯಾ) ಚಿಕಿತ್ಸೆಗಾಗಿ ಬಳಸುವ ಆಂಟಿಹೀಮೋಫೀಲಿಕ್ ಗ್ಲಾಬ್ಯುಲಿನ್ (ಎ.ಎಚ್.ಜಿ.) ರಕ್ತವನ್ನು ಗರಣೆ ಕಟ್ಟಿಸಬಲ್ಲ ವಿಶಿಷ್ಟ ಪ್ರೋಟೀನುಗಳು ಇವನ್ನೂ ಜೈವಿಕ ಔಷಧಿಗಳೆಂದೇ ಪರಿಗಣಿಸಿದೆ. ಇವು ದೇಹದಲ್ಲಿ ವಿಶಿಷ್ಟ ರಕ್ಷಣೆಯನ್ನು ಪ್ರಚೋದಕರೀತಿಯಲ್ಲಿ ಮಾಡುವುದಿಲ್ಲ. ಆದರೆ ಮಿಕ್ಕ ಜೈವಿಕ ಔಷಧಗಳಂತೆಯೇ ಇವುಗಳ ತಯಾರಿಕೆ, ಪರೀಕ್ಷೆ, ಸಂಗ್ರಹಣೆ, ಪ್ರಯೋಗ ಇವೆಲ್ಲವೂ ಇರುವುದರಿಂದ ಇವನ್ನು ಜೈವಿಕ ಔಷಧಗಳ ಪಟ್ಟಿಗೆ ಸೇರಿಸುವುದು ರೂಢಿಯಾಗಿದೆ. ಇದೇ ಗಣನೆಯಂತೆ ಜೈವಿಕ ಔಷಧಗಳ ಪಟ್ಟಿಗೆ ಸೇರಿರುವ ಇತರ ವಸ್ತುಗಳು ಇವು.

ರಕ್ತವರ್ಗಣೆ ಮಾಡಲು ಉಪಯೋಗಿಸುವ ಅಗ್ಲೂಟಿನಿನ್ನುಗಳು
ವಿಷಾಣುಗಳನ್ನು ಗುರುತಿಸಲು ಉಪಯೋಗಿಸುವ ಪ್ರತಿವಸ್ತುಗಳು
ರಕ್ತದಲ್ಲಿ ವಿಶಿಷ್ಟ ಗ್ಯಾಮಾಗ್ಲಾಬ್ಯುಲಿನುಗಳು ಇರುವುದನ್ನು ಪತ್ತೆ ಹಚ್ಚಬಲ್ಲ ವಿಷಾಣುಗಳು ಇಲ್ಲವೆ ಅವುಗಳ ಉತ್ಪನ್ನಗಳು
ವ್ಯಕ್ತಿಯಲ್ಲಿ ಒಗ್ಗದಿಕೆ ಎಂಬ ವಿಶೇಷ ಸೂಕ್ಷ್ಮತೆಯನ್ನು ಪತ್ತಮಾಡಲು ಉಪಯೋಗಿಸುವ 
ವಿಷಾಣುಗಳು, ಬೂಷ್ಟು, ಅಣಬೆಗಳು ಸಸ್ಯಪ್ರಾಣಿಗಳ ಸಾರಗಳು ಮತ್ತು ಉತ್ಪನ್ನಗಳು ಇತ್ಯಾದಿ.
(ಎಸ್.ಆರ್.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ